ತಾಮಸ್ ಅ ಕೆಂಪಿಸ್
1380-1471 : ಜರ್ಮನಿಯ ಕ್ರೈಸ್ತ ಸಂನ್ಯಾಸಿ ಮತ್ತು ಧಾರ್ಮಿಕ ಕೃತಿಗಳ ಲೇಖಕ. ಪ್ರಷ್ಯದ ಕೆಂಪೆನ್‍ನಲ್ಲಿ ರೈತರ ಕುಟುಂಬವೊಂದರಲ್ಲಿ ಜನಿಸಿದ. ಹುಟ್ಟಿದ ಊರಿನ ಹೆಸರಿನಿಂದಲೇ ಖ್ಯಾತನಾಗಿರುವ ಈತನ ಪೂರ್ಣಹೆಸರು ತಾಮಸ್ ಹಾಮರ್‍ಕೆನ್. ನೆದರ್‍ಲ್ಯಾಂಡ್ಸ್‍ನ ಡೇವಂಟರ್‍ನಲ್ಲಿ ಈತನ ಶಾಲಾ ಶಿಕ್ಷಣವಾಯಿತು. ಈತ 1399 ರಲ್ಲಿ ಮೌಂಟ್ ಸೇಂಟ್ ಆ್ಯಗ್ನೇಸ್ ಮಠವನ್ನು ಸೇರಿ 1407 ರಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದ. 1413 ರಲ್ಲಿ ಪಾದ್ರಿಯಾಗಿ ನೇಮಕಗೊಂಡ. ಅನಂತರ 1425 ರಲ್ಲಿ ಉಪಮಠಾಧಿಕಾರಿಯಾಗಿ ಚುನಾಯಿತನಾದ. ಸುಮಾರು ಎಪ್ಪತ್ತಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಈತ ಮಠದಲ್ಲಿಯೇ ಉಳಿದುಕೊಂಡು ಅತ್ಯಂತ ಧರ್ಮನಿಷ್ಠೆ ಹಾಗೂ ಸಾತ್ವಿಕ ಜೀವನ ನಡೆಸಿದ. 
ಬಡಕಲು ಶರೀರಿಯಾದ ತಾಮಸ್ ದಕ್ಷ ಕೆಲಸಗಾರನಾದರೂ ಸಾಕಷ್ಟು ಪ್ರಾಪಂಚಿಕ ವ್ಯವಹಾರಜ್ಞಾನಿಯಾಗಿರಲಿಲ್ಲ. ಜನರ ಗೊಂದಲಗಳಿಂದ ಆದಷ್ಟು ದೂರವಿರಲು ಬಯಸುತ್ತಿದ್ದ ಈತ ತನ್ನ ಬಹಳಷ್ಟು ಸಮಯವನ್ನು ಅಭ್ಯಾಸ ಮತ್ತು ಬರವಣಿಗೆಗೆ ಮೀಸಲಿರಿಸಿದ. ಈತ ತನ್ನ ಇಡೀ ಆಯುಷ್ಯವನ್ನು ಬೈಬಲ್ಲು, ಆರಾಧನಾ ಪುಸ್ತಕಗಳು ಮುಂತಾದ ಧಾರ್ಮಿಕ ಹಾಗೂ ಐತಿಹಾಸಿಕ ಕೃತಿಗಳ ಹಸ್ತಪ್ರತಿಗಳನ್ನು ಸಿದ್ಧಮಾಡುವುದರಲ್ಲೂ ದೀಕ್ಷಾಪೇಕ್ಷಗಳನ್ನು ತರಬೇತು ಮಾಡುವುದರಲ್ಲೂ ಕಳೆದ. 
ಈತ ತನ್ನ ಇಮಿಟೇಷನ್ ಆಫ್ ಕ್ರೈಸ್ಟ್ ಎಂಬ ಧರ್ಮಗ್ರಂಥದಿಂದಾಗಿ ಪ್ರಸಿದ್ಧನಾಗಿದ್ದಾನೆ. ಬೈಬಲ್ಲನ್ನು ಬಿಟ್ಟರೆ ಈ ಗ್ರಂಥವೇ ಹೆಚ್ಚು ಭಾಷೆಗಳಿಗೆ ಅನುವಾದವಾಗಿರುವ ಕೃತಿ. ಈ ಗ್ರಂಥದ ಕರ್ತೃತ್ವದ ಬಗೆಗೆ ಭಿನ್ನಾಭಿಪ್ರಾಯಗಳಿವೆ. ಪ್ಯಾರಿಸ್ಸಿನ ವಿಶ್ವವಿದ್ಯಾಲಯದ ಕುಲಪತಿ ಪ್ರಸಿದ್ಧ ದೇವತಾಶಾಸ್ತ್ರಜ್ಞ ಜೀನ್ ಷೆರ್‍ಸಾನ್ ಇದರ ನಿಜವಾದ ಲೇಖಕನೆಂಬ ವಾದವೊಂದಿದೆ. ಆದರೆ ಈ ಗ್ರಂಥ ತಾಮಸ್‍ನದೇ ಎನ್ನುವದಕ್ಕೆ ಸಾಕಷ್ಟು ಆಧಾರಗಳಿವೆ. ಈತನ ಮೂವರು ಸಮಕಾಲೀನರು ಈತನ ಕರ್ತೃತ್ವವನ್ನು ಸಮರ್ಥಿಸಿದ್ದಾರೆ. ಈತ ತಾನೇ ಸಿದ್ಧಪಡಿಸಿದ ಅದರ ಅನೇಕ ಪ್ರತಿಗಳಿವೆ. ಅದರ ಒಂದು ಪ್ರತಿಯಲ್ಲಿ ಈತನೇ ಅದರ ಲೇಖಕನೆಂದು ಸ್ವಷ್ಟವಾಗಿ ಸೂಚಿಸಲಾಗಿದೆ. ಶೈಲಿಯನ್ನು ಗಮನಿಸಿದಾಗಲೂ ಅದು ಈತನ ಕೃತಿಯೆಂದೇ ಹೇಳಬಹುದಾಗಿದೆ.
ಈತನ ಸಮಸ್ತ ಕೃತಿಗಳನ್ನು ಎಮ್. ಜೆ. ಪೋಲ್ ಎಂಬಾತ 1902-1922 ರ ಅಂತರದಲ್ಲಿ ಮುದ್ರಿಸಿ ಪ್ರಕಟಿಸಿದ್ದಾನೆ. 
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ